ನಾವು ಇಷ್ಟೊಂದು ಅಸಹಿಷ್ಣುತೆಯನ್ನು ಹೊಂದಿದವರಗಿದ್ದೆವಾ!! ಖಂಡಿತ ಇಲ್ಲ. ಪ್ರತಿಯೊಂದನ್ನೂ ದ್ವೇಷಿಸುವ, ಆ ಮೂಲಕ ಕನ್ನಡವನ್ನು ಸಂಕೋಚಿತಗೋಳಿಸುವ ಹುನ್ನಾರಕ್ಕೆ ಬಲಿಯಾಗುತ್ತೀದ್ದೆವಾ!! ಗೊತ್ತಿಲ್ಲ. ಹಾಗಾದರೆ ಕನ್ನಡಿಗರ ವಿಶಾಲ ಹೃದಯವಂತಿಕೆಯನ್ನು ಪರಭಾಶಿಕರು ದುರುಪಯೋಗಪಡಿಸಿಕೊಂಡಿಲ್ಲವೇ!!? ಇದರಿಂದಾಗಿ ಕನ್ನಡಿಗರಿಗೆ ತೊಂದರೆಯಾಗಿಲ್ಲವೇ!!? ಖಂಡಿತ ತೊಂದರೆಯಾಗಿದೆ. ಇದನ್ನು ಸರಿಪಡಿಸಲು ಕನ್ನಡವನ್ನು ಒಂದು ಧರ್ಮಕ್ಕೆ ಒಂದು ಪ್ರದೇಶಕ್ಕೆ ಸೀಮಿತಗೊಳಿಸುವುದು ಹಾಗೂ ಎಲ್ಲವನ್ನು ಅಸಹಿಷ್ಣುತೆಯ ಭಾವದಿಂದ ನೋಡುವುದು ಪ್ರತಿಯೊಂದನ್ನೂ ತಿರಸ್ಕರಿಸುವುದು ಸರಿಯಲ್ಲ. ಭಾಷೆ ಎಂದಿಗೂ ಜಡವಾಗಬಾರದು, ಭಾಷೆಯು ನಿರಂತರವಾಗಿ ಬೆಳವಣಿಗೆಯನ್ನು ಹೊಂದುತ್ತಾ; ಸಮಕಾಲಿನ ಎಲ್ಲಾ ವಿಷಯಗಳನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತಾ ಬೆಳೆಯಬೇಕು. ನಿಮಗೆ ನೆನಪಿರಲಿ ಕನ್ನಡ ಭಾಷೆಗೆ ಲಭಿಸಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳಲ್ಲಿ ಮೂರು ಕವಿಗಳ ಮಾತೃಭಾಷೆ ಕನ್ನಡೇತರ ಭಾಷೆಯಾಗಿದೆ. ಬೇಂದ್ರೆಯವರ ಮಾತೃಭಾಷೆ ಮರಾಠಿಯಾಗಿದ್ದರೆ, ಗಿರೀಶ್ ಕಾರ್ನಾಡ್ ರವರ ಮಾತೃಭಾಷೆ ಕೊಂಕಣಿ, ಹಾಗೆಯೇ ಮಾಸ್ತಿಯವರ ಮಾತೃಭಾಷೆ ತಮಿಳು, ಎಂಬುದನ್ನು ಯಾರು ಮರೆಯುವಂತಿಲ್ಲ. ಇದು ಸಾಧ್ಯವಾಗಿದ್ದು ಕನ್ನಡವು ಎಲ್ಲರನ್ನೂ ಒಪ್ಪಿಕೊಳ್ಳುವ ಗುಣವನ್ನು ಹೊಂದಿದ್ದರಿಂದ ಮಾತ್ರ. ಇಲ್ಲಿ ಉರ್ದು ಮಾತೃಭಾಷೆಯನ್ನಾಗಿ ಹೊಂದಿರುವ ನಿಸಾರ್ ಅಹಮದ್ ರವರು ಕನ್ನಡದ ದೀಪವನ್ನು ಹಚ್ಚಲು ಸಾಧ್ಯವಾಗುತ್ತದೆ. ಇದು ಕನ್ನಡ ಹೇಗೆ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುವ ಗುಣವನ್ನು ಹೊಂದಿದೆ ಎಂಬುದಕ್ಕೆ ಉದಾಹರಣೆ. ಸಾಮಾಜಿಕ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಎಲ್ಲವನ್ನು ಕಪ್ಪು ಮತ್ತು ಬಿಳಿಪುಗಳಲ್ಲಿ ನೋಡುವುದು ಚಟವಾಗಿಬಿಟ್ಟಿದೆ. ನಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲು ನಾವು ಯಾವುದೇ ಪೂರ್ವಪರವನ್ನು ಯೋಚಿಸದೇ ನಮ್ಮ ವಾದವನ್ನು ಮಂಡಿಸುತಿದ್ದೇವೆ ಕೆಲವೊಂದು ಸಮಯದಲ್ಲಿ ನಮ್ಮ ಎದುರಾಳಿ ಸಿದ್ದಾಂತವನ್ನು ಪ್ರತಿನಿಧಿಸುವವರ ಒತ್ತಡಕ್ಕೆ ಮಣಿದು ನಮ್ಮ ಸೈದ್ಧಂತಿಕ ದಿವಾಳಿತನವನ್ನು ಪ್ರದರ್ಶಿಸುತ್ತಿದ್ದೇವೆ. ಈ ಕಾರಣಗಳಿಂದಾಗಿಯೇ ಭಾಷೆ ಎನ್ನುವುದಕ್ಕೆ ಯಾವುದೇ ಚೌಕಟ್ಟು ಇಲ್ಲದಿದ್ದರೂ ನಾವು ಒಂದು ಭಾಷೆಯನ್ನು ಒಂದು ಚೌಕಟ್ಟಿನಲ್ಲಿ ಹಾಕಿ ಬಂಧಿಸಲು ಪ್ರಯತ್ನಿಸುತಿದ್ದೇವೆ. ನನ್ನ ನೆಚ್ಚಿನ ಕನ್ನಡ ಅಭಿಮಾನಿಗಳಲ್ಲಿ ನನ್ನದೊಂದು ಮನವಿ ಕನ್ನಡ ಎನ್ನುವುದು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ ಬೆಂಗಳೂರಿನ ಆಚೆಗೂ ಕನ್ನಡವನ್ನು ಬಳಸುವ ಜನರಿದ್ದಾರೆ ಅಂದರೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಪಕ್ಕದ ಗಡಿ ನಾಡುಗಳಲ್ಲೂ ಕೂಡ ಅನೇಕ ಜನರ ಮಾತೃಭಾಷೆ ಕನ್ನಡ. ಹಾಗಾಗಿ ಬೆಂಗಳೂರಿನಲ್ಲಿ ಆಡಳಿತಾತ್ಮಕವಾಗಿ ಯಾವುದೇ ರೀತಿಯ ಬದಲಾವಣೆಗೆ ಹೋರಾಟ ಮಾಡಿ. ಅದರೆ ಅದು ನಮ್ಮ ಗಡಿ ಆಚೆಗಿನ ಕನ್ನಡಿಗರಿಗೆ ಮುಜುಗರ ಅಗುವ ರೀತಿಯಲ್ಲಿ ಇರಬಾರದು. ನಮ್ಮ ಭಾಷೆ ಸದಾ ಕಾಲ ವೈಜ್ಞಾನಿಕ ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದಿದೆ ಇದು ನಿಮ್ಮ ಗಮನದಲ್ಲಿರಲಿ, ಅಶಕ್ತರಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡಿಕೊಂಡು ಬಂದಿದೆ, ನೆನಪಿರಲಿ. ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯವನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡಿದೆ. ಇದು ಕನ್ನಡ ಭಾಷೆ ತನ್ನ ಅಂತರಾಳದಲ್ಲಿ ಅಡಗಿಸಿಕೊಂಡಿರುವ ಗುಣಗಳು. ಹಾಗಾಗಿ ಯಾರೋ ಪ್ರಚೋದಿಸುತ್ತಿದ್ದಾರೆ ಎಂದು ವಿಚಾರ ಹೀನವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುವ ಬದಲು ಕನ್ನಡ ಭಾಷೆಯ ಚಾರಿತ್ರಿಕ ಹಿನ್ನೆಲೆ ಹಾಗೂ ಅದರ ಅಂತರಾತ್ಮವನ್ನು ಬಿಂಬಿಸುವ ರೀತಿಯಲ್ಲಿ ನಡೆದುಕೊಂಡರೆ ಒಳ್ಳೆಯದು.