Thursday, 11 December 2025

ಮತಚೂರಿ ಆರೋಪ vs ಇತಿಹಾಸ: 1946 ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ನಿಜ.

  ಸಂಸತ್ತಿನಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದಾಗ ಗೃಹ ಸಚಿವ ಅಮಿತ್ ಶಾ ರವರು ಮತದಾನ ಕಳ್ಳತನಕ್ಕೆ ಉದಾಹರಣೆಯಾಗಿ ತಮ್ಮ ಎಂದಿನ ರೀತಿಯಲ್ಲಿ ಮತ್ತೆ ನೆಹರುರನ್ನು ಎಳೆದು ತಂದು, ನೆಹರು ಮೊದಲ ಪ್ರಧಾನಿಯಾದದ್ದು ಮತ ಕಳ್ಳತನರಿಂದ ಎಂದು ಹೇಳಿ, 1946ರ ಒಂದು ಸನ್ನಿವೇಶವನ್ನು ಸಾಕ್ಷಿಯಾಗಿ ಹೇಳಿದರು. ನೆಹರು ಒಂದು ಮತವೂ ಪಡೆದಿರಲಿಲ್ಲ, (ಪಾಟಿಲರಿಗೆ 12 ಮತ ಮತ್ತು 3 ಮತಗಳು ರಾಜೇಂದ್ರ ಪ್ರಸಾದ್ ರವರಿಗೆ) ಪಾಟೀಲರು ಹೆಚ್ಚಿನ ಮತ ಪಡೆದಿದ್ದರೂ ಅವರನ್ನು ಬಿಟ್ಟು ನೆಹರು ಪ್ರಧಾನಿಯಾದರು ಎಂದು ಆರೋಪಿಸಿದರು. ಇದನ್ನು ಕೇಳುತ್ತಿದ್ದಂತೆಯೇ ಕಾಂಗ್ರೆಸ್‌ನ ಕೆಲ ಸದಸ್ಯರು ಗಾಂಧೀಜಿಯವರನ್ನು ಎಳೆದು ತಂದು, “ಆಗ ಗಾಂಧೀಜಿ ಮಾಡಿದ ಕಾರ್ಯ ತಪ್ಪು ಎಂದು ಹೇಳುತ್ತಿದ್ದೀರಾ?” ಎಂದು ಪ್ರಶ್ನಿಸಿದರು.

ಹಾಗಾದರೆ ನಿಜ ಏನು? ನೆಹರು ಮತ್ತು ಪಟೇಲರ ನಡುವೆ ಪ್ರಧಾನಿಯಾಗಲು ಪೈಪೋಟಿ ನಡೆದಿದೆಯೇ? ಎಂಬುದನ್ನು ಇತಿಹಾಸದ ಆಧಾರದ ಮೇಲೆ ನೋಡೋಣ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯನ್ನು ಗಮನಿಸೋಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಾಮಾನ್ಯವಾಗಿ ತನ್ನ ಅಧ್ಯಕ್ಷರನ್ನು ಪ್ರತಿ ವರ್ಷ ಒಂದು ಅಧಿವೇಶನದಿಂದ ಮತ್ತೊಂದು ಅಧಿವೇಶನದವರೆಗೆ ಚುನಾವಣೆಗಳ ಮೂಲಕ ಆಯ್ಕೆ ಮಾಡುತ್ತಿತ್ತು (1930ರ ತನಕ). ಬ್ರಿಟಿಷರ ನಿರ್ಬಂಧಗಳಿಂದಾಗಿ 1930 ನಂತರ ಸಭೆಗಳು ನಿಗದಿತ ವೇಳೆಗೆ ನಡೆಯದೆ ಇದ್ದರೂ, ಅಧ್ಯಕ್ಷರ ಅವಧಿ ಸಾಮಾನ್ಯವಾಗಿ ಒಂದು ವರ್ಷವೇ ಆಗಿತ್ತು. ಆಯ್ಕೆ ಪ್ರಕ್ರಿಯೆಯನ್ನು ಗಮನಿಸುವುದಾದರೆ ಅಧಿವೇಶನಕ್ಕೂ ಮುನ್ನ ಪ್ರಾಂತ್ಯ ಕಾಂಗ್ರೆಸ್ ಸಮಿತಿಗಳ (PCC) ಅಧ್ಯಕ್ಷರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರು ಒಟ್ಟಿಗೆ ಒಬ್ಬರ ಹೆಸರನ್ನು ಆಯ್ಕೆ ಮಾಡುತ್ತಿದ್ದರು. ಗಾಂಧೀಜಿಯವರ ಪ್ರಭಾವ ಹೆಚ್ಚಾದ ನಂತರ, ಅವರು ಸೂಚಿಸಿದ ಹೆಸರೇ ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆಲ್ಲುತ್ತಿತ್ತು. ಉದಾಹರಣೆಗೆ 1934–35 ರಾಜೇಂದ್ರ ಪ್ರಸಾದ್ 1936–37 ಜವಾಹರಲಾಲ್ ನೆಹರು 1938 ಸುಭಾಷ್ ಚಂದ್ರ ಬೋಸ್ 1940 ಮೌಲಾನಾ ಅಬ್ದುಲ್ ಕಲಾಂ ಆಜಾದ್. 1939 ಹೊರತುಪಡಿಸಿ, ಗಾಂಧೀಜಿಯವರ ಶಿಫಾರಸಿನವರೇ ಅಧ್ಯಕ್ಷರಾಗುತ್ತಿದ್ದರು. ಹಾಗಾದರೆ ಗಾಂಧೀಜಿಯವರು ಅಧ್ಯಕ್ಷರ ಹೆಸರನ್ನು ಸೂಚಿಸಲು ಪರಿಗಣಿಸುತಿದ್ದ ಮಾನದಂಡಗಳು ಏನು ಎಂಬುದನ್ನು ಗಮನಿಸಿದರೆ 1940ರ ಸ್ಥಿತಿ ನೆನಪಿಗೆ ಬರುತ್ತದೆ. 1939ರಲ್ಲಿ ಕಾಂಗ್ರೆಸ್ ತನ್ನ ಪ್ರಾಂತ್ಯ ಸರ್ಕಾರಗಳಿಂದ ರಾಜೀನಾಮೆ ನೀಡಿದ ನಂತರ ಇಂತಹದೇ ಸಂದರ್ಭಕ್ಕೆ ಕಾಯುತ್ತಿದ್ದ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಸಿಂಧ್‌ನಲ್ಲಿ ಒಟ್ಟಾಗಿ ಸರ್ಕಾರ ರಚಿಸಿದವು. ಮತೀಯ ರಾಜಕೀಯ ಬಲವಾಗುತ್ತಿರುವುದನ್ನು ಗಾಂಧೀಜಿ ಗಮನಿಸಿದ್ದರು. ಅದಕ್ಕಾಗಿ ಎಲ್ಲರನ್ನೂ ಪ್ರತಿನಿಧಿಸುವ ಮುಖ ಬೇಕು ಎಂದು ಮೌಲಾನಾ ಆಜಾದ್ ಅವರನ್ನು ಅಧ್ಯಕ್ಷರಾಗಿ ಶಿಫಾರಸು ಮಾಡಿದರು, ಆ ಮೂಲಕ ಕಾಂಗ್ರೆಸ್ ಪಕ್ಷವು ಸಮಗ್ರ ಭಾರತವನ್ನು ಪ್ರತಿನಿಧಿಸುವ ಪಕ್ಷ ಎಂದು ಸೂಚ್ಯವಾಗಿ ಹೇಳಿದರು. ಇನ್ನು 1946ರ ಸ್ಥಿತಿ ನೋಡೋಣ, ಅಮಿತ್ ಶಾ ಉಲ್ಲೇಖಿಸಿದ ಘಟನೆಯ ಬಗ್ಗೆ ತಿಳಿಯಲು, 1946ರ ಪ್ರಾಂತ್ಯ ಚುನಾವಣೆಗಳಲ್ಲಿ 1939ರಲ್ಲಿ ಹಿಂದೂ ಮಹಾಸಭಾ ಜೊತೆಯಾಗಿ ಸರ್ಕಾರ ರಚಿಸಿದ್ದ ಫಲವಾಗಿ ಮುಸ್ಲಿಂ ಲೀಗ್ ಅಲ್ಪಸಂಖ್ಯಾತರಿಗೆ ಮೀಸಲಿದ್ದ ಹೆಚ್ಚಿನ ಸ್ಥಾನಗಳನ್ನು ಗೆದ್ದಿತು. ಮುಂದುವರೆದು 24–03–1946ರಂದು ಕ್ಯಾಬಿನೆಟ್ ಮಿಷನ್ ಸದಸ್ಯರು ಭಾರತಕ್ಕೆ ಬರುತ್ತಾರೆ, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಅವರು ಎರಡು ಯೋಜನೆಗಳನ್ನು ನೀಡಿರುತ್ತಾರೆ 1. ದೀರ್ಘಾವಧಿ ಯೋಜನೆಯಾಗಿ ಸಂವಿಧಾನ ರಚನೆ 2. ಅಲ್ಪಾವಧಿ ಯೋಜನೆಯಾಗಿ ಕೇಂದ್ರ ಸರ್ಕಾರ ರಚನೆ (ಕೇವಲ: ರಕ್ಷಣಾ, ವಿದೇಶಾಂಗ, ಸಂವಹನ) ಈ ವರದಿಯನ್ನು 16–05–1946 ರಂದು ಘೋಷಿಸುತ್ತಾರೆ. 

ಈ ಎಲ್ಲಾ ಬೆಳವಣಿಗೆಗಳಿಂದಾಗಿ ಕಾಂಗ್ರೆಸ್ಸಿನ ಸದಸ್ಯರಿಗೆ ಶೀಘ್ರದಲ್ಲಿ ನಮಗೆ ಸ್ವಾತಂತ್ರ್ಯ ಸಿಗಲಿದೆ ಎಂದು ಅನಿಸತೊಡಗುತ್ತದೆ. ಈ ಹಿನ್ನಲೆಯಲ್ಲಿ ಆರು ವರ್ಷಗಳ ಬಳಿಕ ಅಧ್ಯಕ್ಷರ ಚುನಾವಣೆ ನಡೆಯುತ್ತದೆ. ಹೀಗೆ ಸಭೆ ಸೇರಿದ್ದ 15 ಪ್ರಾಂತ್ಯಗಳ PCC ಅಧ್ಯಕ್ಷರ ಪೈಕಿ, 12 ಮಂದಿ ಪಾಟೀಲರನ್ನು ಶಿಫಾರಸು ಮಾಡಿದರೆ 3 ಮಂದಿ ರಾಜೇಂದ್ರ ಪ್ರಸಾದ್ ಅವರನ್ನು ಶಿಫಾರಸು ಮಾಡುತ್ತಾರೆ. ಗಾಂಧೀಜಿ ತಮ್ಮ ಆಯ್ಕೆಯಾಗಿ ನೆಹರುರನ್ನು ಶಿಫಾರಸು ಮಾಡಿದರು. ಪಾಟೀಲರು ಗಾಂಧೀಜಿಯವರ ಮಾತಿಗೆ ಮಣಿದು, ಸ್ಪರ್ಧೆಯಿಂದ ಹಿಂದೆ ಸರಿದರು, ಆದ್ದರಿಂದ 06–07–1946 ರಂದು ನೆಹರು ಅವಿರೋಧವಾಗಿ ಅಧ್ಯಕ್ಷರಾದರು. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ನೆಹರುರವರು ಅಧ್ಯಕ್ಷರಾಗಲು ಪ್ರಯತ್ನಿಸಿರಲಿಲ್ಲ ಬಯಸದೆ ಬಂದ ಈ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ, ಪಾಟೀಲರು ನಾನೇ ಅಧ್ಯಕ್ಷನಾಗಬೇಕು ಎಂದು ಒತ್ತಾಯಿಸಿದ್ದರು ಎಂಬುದಕ್ಕೆ ದಾಖಲೆಗಳು ಸಿಗುವುದಿಲ್ಲ. ಹಾಗಾದರೆ ಗಾಂಧೀಜಿಯವರು ನೆಹರುರನ್ನು ಏಕೆ ಆಯ್ಕೆ ಮಾಡಿದರು? ಎನ್ನುವುದಕ್ಕೆ 2 ಕಾರಣಗಳನ್ನು ನೋಡಬಹುದು ಮೊದಲನೆಯದಾಗಿ ವಿದೇಶಾಂಗ ಅನುಭವ; ನೆಹರುರವರು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಅಂತರರಾಷ್ಟ್ರೀಯ ಕಾಂಗ್ರೆಸ್ ಎಂಬ ಸಂಘಟನೆ ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಈ ವೇದಿಕೆಯನ್ನು ಬಳಸಿಕೊಂಡು ಅವರು ಅಂತರಾಷ್ಟ್ರೀಯ ಸಂಪರ್ಕಗಳನ್ನು ಸ್ಥಾಪಿಸಿದರು ಮತ್ತು ಭಾರತದ ಸ್ವಾತಂತ್ರ್ಯದ ಹಾಗೂ ಜಾಗತಿಕ ವಸಾಹತುಶಾಹಿ ವಿರೋಧಿ ಉದ್ದೇಶವನ್ನು ಉತ್ತೇಜಿಸಿದ್ದರು. ಅಮೇರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಜನತಾಂತ್ರಿಕ ಮೌಲ್ಯಗಳ ಪ್ರಚಾರವೂ ಮಾಡಿದ್ದು, ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದರು. ರಕ್ಷಣೆಯ ಅನುಭವ ಇಬ್ಬರಿಗೂ ಇರಲಿಲ್ಲ ಎಂದೇ ಹೇಳಬಹುದು. ಎರಡನೆಯ ಕಾರಣ ಎಂದರೆ ನೆಹರುರವರು ಎಲ್ಲರನ್ನು ಒಗ್ಗೂಡಿಸುವ ವ್ಯಕ್ತಿ; ಕ್ಯಾಬಿನೆಟ್ ಪ್ಲ್ಯಾನ್ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಎಲ್ಲಾ ಪಕ್ಷಗಳ ಪ್ರತಿನಿಧಿ ಅಗತ್ಯ ಎಂಬುದು ವರದಿಯಲ್ಲಿ ಇತ್ತು, ಪಾಟೀಲರು ಒಳರಾಷ್ಟ್ರೀಯ ರಾಜಕೀಯದಲ್ಲಿ ಶಕ್ತಿಶಾಲಿ ಮತ್ತು ಕಠಿಣ ನಿಲುವಿನವರಾಗಿದ್ದರು, ನೆಹರು ಹೆಚ್ಚು ಸಮನ್ವಯಕಾರಿ. ಹೀಗೆ 1946ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ನೆಹರೂರವರು ಹೆಚ್ಚು ಸೂಕ್ತ ವ್ಯಕ್ತಿ ಎಂದು ಗಾಂಧೀಜಿಯವರು ನಿರ್ಧರಿಸುತ್ತಾರೆ. ಮುಂದುವರೆದು 02–09–1946 ತಾತ್ಕಾಲಿಕ ಸರ್ಕಾರ (ಕಾರ್ಯಕಾರಿ ಮಂಡಳಿ) ರಚನೆಯಾಯಿತು. ಈ ಕಾರ್ಯಕಾರಿ ಮಂಡಳಿಗೆ ನೆಹರುರವರು ಉಪಾಧ್ಯಕ್ಷರಾಗಿ ಹಾಗೂ ವಿದೇಶಾಂಗ ಸಚಿವರಾಗುತ್ತಾರೆ, ಸರ್ದಾರ್ ವಲ್ಲಭಾಯಿ ಪಟೇಲ್ ರವರು ಗೃಹ, ಮಾಹಿತಿ-ಪ್ರಸಾರ ಸಚಿವರಾಗುತ್ತಾರೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ 

1. 1946 ರಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡಿತ್ತು, 

2. ಪಾಟೀಲರಿಗೆ ಬಂದ ಮತಗಳು ಅಧ್ಯಕ್ಷರ ಹುದ್ದೆಗೆಯೇ ಹೊರತು ಪ್ರಧಾನಿ ಹುದ್ದೆಗೆ ಅಲ್ಲ.

3. 1946ರಲ್ಲಿ ಪ್ರಧಾನಿ ಎಂಬ ಹುದ್ದೆಯೇ ಇರಲಿಲ್ಲ.

ಹೀಗೆ ಇತಿಹಾಸದಕ್ಕೂ ಸುಳ್ಳನ್ನು ಹೇಳುತ್ತಾ ಬಂದಿರುವ ಆರ್ ಎಸ್ ಎಸ್ ಮತ್ತು ಬಿಜೆಪಿಯವರು ನೆಹರುರವರು ತಮ್ಮ ಯೋಗ್ಯತೆಯಿಂದ ಅಂದು ಕಾರ್ಯಂಗದ ಉಪಾಧ್ಯಕ್ಷರಾದರು ಹಾಗೂ ಅವರು ಬಯಸದೆ ಬಂದ ಕರ್ತವ್ಯವನ್ನು ನಿಭಾಯಿಸಿದರು ಎಂಬುದನ್ನು ಮರೆಮಾಚುತ್ತರೆ. ಹಾಗಾದರೆ ನೆಹರುರವರು ನಿಜವಾಗಿ ಪ್ರಧಾನಿಯಾದದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಎಂದರೆ, 20–02–1947 ರಂದು ಬ್ರಿಟಿಷರು 1948ರೊಳಗೆ ಸ್ವಾತಂತ್ರ್ಯ ನೀಡುವುದಾಗಿ ಘೋಷಣೆ ಮಾಡುತ್ತಾರೆ, (ಆಗ ಕಾಂಗ್ರೆಸ್ ಅಧ್ಯಕ್ಷ: ಜೆ.ಬಿ. ಕೃಪಲಾನಿ) ಗಾಂಧೀಜಿಗೆ ನೆಹರುರವರೇ ಪ್ರಧಾನಿಯಾಗಬೇಕು ಎಂದಿದ್ದರೆ 1947ರಲ್ಲಿ ಅವರನ್ನು ಅಧ್ಯಕ್ಷರನ್ನೇ ಮಾಡುತ್ತಿದ್ದರು ಆದರೆ ಹಾಗೆ ಆಗಲಿಲ್ಲ. 18–07–1947ರಂದು ಭಾರತೀಯ ಸ್ವಾತಂತ್ರ್ಯ ಕಾಯ್ದೆ ಅಂಗೀಕಾರ ವಾಗುತ್ತದೆ ಮತ್ತು 15–08–1947ರಂದು ಭಾರತ ಸ್ವತಂತ್ರವಾಗುತ್ತದೆ ವೈಸರಾಯರು ಕಾರ್ಯಾಂಗದ ಉಪಾಧ್ಯಕ್ಷರಾಗಿದ್ದ ನೆಹರುರಿಗೆ ಅಧಿಕಾರ ಹಸ್ತಾಂತರಿಸುತ್ತಾರೆ. ಇದರಿಂದ ನೆಹರು ಮೊದಲ ತಾತ್ಕಾಲಿಕ ಪ್ರಧಾನಿಯಾಗಿ ನೇಮಕವಾಗುತ್ತಾರೆ. ಹೀಗೆ ನೆಹರೂರವರು ಈ ದೇಶದ ಮೊದಲ ತಾತ್ಕಾಲಿಕ ಸರ್ಕಾರದ ಪ್ರಧಾನಿಯಾಗುತ್ತಾರೆ ಇದು ಪೂರ್ಣ ಸತ್ಯ ಆದರೆ ಈ ಬೆಳವಣಿಗೆಗಳನ್ನು ಅಪೂರ್ಣವಾಗಿ ಪ್ರತಿಯೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಸುಳ್ಳಲ್ಲ ಹಾಗಾಗಿ ಗೃಹ ಸಚಿವರು ವೋಟ್ ಚೂರಿ ಬಗ್ಗೆ ಹೇಳಬೇಕಾದರೆ ನೆಹರೂರವರನ್ನು ಎಳೆದು ತಂದದ್ದು ಅಕ್ಷಮ್ಯ ಹಾಗೂ ರಾಜಕೀಯ ಪ್ರೇರಿತ ಸುಳ್ಳುಗಳನ್ನು ಪದೇಪದೇ ಹೇಳಿ ಸುಳ್ಳನ್ನು ಸತ್ಯವನ್ನಾಗಿಸುವ ಹುನ್ನಾರ ಅಷ್ಟೇ ಈ ಘಟನಾವಳಿಗಳ ಬಗ್ಗೆ ಕಾಂಗ್ರೆಸ್ಸಿನ ನಾಯಕರಲ್ಲಿ ಸ್ಪಷ್ಟ ಚಿತ್ರಣ ಇಲ್ಲದಿರುವುದು ಕೂಡ ಬಿಜೆಪಿಯವರಿಗೆ ವರದಾನವಾಗಿದೆ, ಕಾಂಗ್ರೆಸ್ ನಾಯಕರು ಇತಿಹಾಸ ಓದದೇ ಇರುವುದರಿಂದ ಸುಳ್ಳುಗಳು ಸುಲಭವಾಗಿ ಪ್ರಚಾರವಾಗುತ್ತಿವೆ.






ಅದಂ ಖಾನ್ ಮರುವೇಕೆರೆ 🖊️🖊️