Sunday, 24 November 2024

 ಮಾಧ್ಯಮದ ಹೊಣೆಗಾರಿಕೆ ಮತ್ತು ಪ್ರಸ್ತುತ ಸ್ಥಿತಿಗತಿ 


ಮುಂಜಾನೆ ಬೇಗ ಎದ್ದು ಮನೆಯ ಹತ್ತಿರ ಎಸೆದು ಹೋದ ದಿನಪತ್ರಿಕೆಯನ್ನು ಎತ್ತಿ ಕಾಫಿ ಸವಿಯತ್ತ ನಮ್ಮ ಸುತ್ತಮುತ್ತ ಹಾಗೂ ಇಡೀ ರಾಜ್ಯ ದೇಶ ವಿದೇಶಗಳ ಸುದ್ದಿಯನ್ನು ಯಾವುದೇ ಪೂರ್ವಗ್ರಹ ಪಿಡಿತವಾಗಿರದಂತೆ ಓದುತ್ತಿದ್ದ ಜನರಿಗೆ, 20ನೇ ಶತಮಾನದ ಕೊನೆಯಲ್ಲಿ ಬಂದ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ದಿನದ ಕೊನೆಯಲ್ಲಿ ಮನೆ ಮಂದಿ ರಾತ್ರಿ ಊಟ ಮಾಡಲು ಕೋರುತ್ತಿದ್ದ ಸಮಯವಾದ ಎಂಟು ಗಂಟೆಗೆ ಸಮಾಚಾರವನ್ನು ಪ್ರಸಾರ ಮಾಡಲು ಶುರು ಮಾಡಿದವು. ದೃಶ್ಯ ಮಾಧ್ಯಮದಲ್ಲಿ ಬಂದ ಸುದ್ದಿಯು ಮನೆಯಲ್ಲಿ ಇದ್ದ ಅನಕ್ಷರಸ್ಥರಿಗೂ ಸುದ್ದಿಯನ್ನು ತಲುಪಿಸುತ್ತಿದ್ದ ಕಾರಣ, ಅದು ಬಹುಬೇಗ ಪ್ರಚಾರ ಪಡೆಯಿತು ಹೀಗೆ ವಾರ್ತೆಗಳು ಯಾವುದೇ ಪೂರ್ವಗ್ರಹ ಪೀಡಿತವಾಗಿರದೆ ಕೇವಲ ಸುದ್ದಿಯನ್ನು ಜನರಿಗೆ ತಲುಪಿಸುತ್ತಿದ್ದವು. ದೃಶ್ಯ ಮಾಧ್ಯಮದಲ್ಲಿ 21ನೇ ಶತಮಾನದ ಆರಂಭದಲ್ಲಿ ಅಂದರೆ 2008-09ರ ಸಂದರ್ಭದಲ್ಲಿ 24*7 ಸುದ್ದಿ ಚಾನೆಲ್ ಗಳು ಪ್ರಾರಂಭವಾದವು, ಇದರೊಂದಿಗೆ ಪತ್ರಿಕಾ ರಂಗಕ್ಕೆ ಇದ್ದ ಘನತೆಯು ಕುಗ್ಗಿತು. 24 ತಾಸು ಕೂಡ ಯಾವುದನ್ನಾದರೂ ಪ್ರಸಾರ ಮಾಡುವ ಗೋಜಿನಲ್ಲಿ ದಿನ ಭವಿಷ್ಯ ಎಂದು ಬೆಳಗಿನ ಅವಧಿಯು ಮೀಸಲಾಯಿತು, ಹೀಗೆ ಪತ್ರಿಕಾರಂಗದಲ್ಲಿ ಪತ್ರಕರ್ತರ ಜಾಗವನ್ನು ಕಾವಿಧಾರಿಗಳು ಆಕ್ರಮಿಸಿಕೊಂಡರು. ನೋಡು ನೋಡುತ್ತಲೇ ಪತ್ರಿಕಾರಂಗವು ಒಂದು ಬೃಹತ್ ಉದ್ಯಮವಾಗಿ ಮಾರ್ಪಟ್ಟಿತು. ಪತ್ರಿಕಾ ರಂಗವು ಉದ್ಯಮಿಗಳ ವಶಕ್ಕೆ ಬಂದಿತು, ಉದ್ಯಮಿಗಳ ಕೈಯಲ್ಲಿ ಸಿಲುಕಿದ ಪತ್ರಿಕಾ ರಂಗವು ತನ್ನ ಪ್ರತಿಸ್ಪರ್ಧಿಗಿಂತ ಮೊದಲು ತಾನು ಸುದ್ದಿಯನ್ನು ಪ್ರಸಾರ ಮಾಡಲು ಯಾವುದೇ ಸುದ್ದಿಯ ಪೂರ್ವ ಪರಾವಿಚಾರ ಮಾಡದೇ ಸುದ್ದಿಯನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು, ಇದು ಸಮಾಚಾರದ ಗುಣಮಟ್ಟದ ಕುಸಿತಕ್ಕೆ ಕಾರಣವಾಯಿತು. ಇದೆಲ್ಲವುಗಳ ಜೊತೆಗೆ ಸರ್ಕಾರ ನೀಡುವ ಜಾಹೀರಾತಿನಿಂದ ಹಣ ಮಾಡಲು ಸಂವಿಧಾನದ ಕಾವಲು ನಾಯಿಯಾಗಿ ಇರಬೇಕಾಗಿದ್ದ ಪತ್ರಿಕಾ ರಂಗವು ಸರ್ಕಾರದ ಜಾಹೀರಾತಿಗೆ ಕಾದು ನಿಲ್ಲುವ ನಾಯಿಗಳಾದರು. ಜಾಹೀರಾತು ಆದಾಯ ಮತ್ತು ವೀಕ್ಷಕರ ಸಂಖ್ಯೆಯ ಮೇಲಿನ ಅತಿಯಾದ ಒತ್ತು ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಮತ್ತು ನಿಷ್ಪಕ್ಷತೆಯನ್ನು ಹಾನಿಗೊಳಿಸಿತು. ಇದು ಸಾಲದು ಎಂಬಂತೆ 2014ರ ನಂತರ ತನ್ನ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೈತಿಕತೆಯ ಎಲ್ಲಾ ರೀತಿಯ ಎಲ್ಲೆಯನ್ನು ಮೀರಿ ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸಲಾರಂಭಿಸಿದರು ಈ ಮತೀಯ ವಿಚಾರವೂ ಆಳುವ ವರ್ಗದ ಮನಸ್ಥಿತಿಗೆ ಒಗ್ಗುವ ಹಾಗೂ ಅವರಿಗೆ ಮತವನ್ನು ಕ್ರೂಢೀಕರಿಸಲು ಸಹಕಾರ ಮಾಡುವುದರಿಂದ ಸರ್ಕಾರವು ಸುದ್ದಿ ಮಾಧ್ಯಮಗಳ ಬೆನ್ನಿಗೆ ನಿಂತು ಎಲ್ಲಾ ರೀತಿಯ ಧನ ಸಹಾಯ ಮಾಡಲಾರಂಭಿಸಿದರು, ಈ ಋಣಕ್ಕೆ ಸ್ವಾಮಿ ನಿಷ್ಠೆಯನ್ನು ಸಂದಾಯ ಮಾಡಲು, ರಾಜಕೀಯ ಪಕ್ಷಗಳಿಂದ ಬರುವ ಒತ್ತಡವು ಪತ್ರಿಕೋದ್ಯಮವನ್ನು ರಾಜಕೀಯದ ಗುಲಾಮರನ್ನಾಗಿಸಿದರು. ಸಮಾಜದ ಶಾಂತಿಯನ್ನು ಕದಡುವ, ಎರಡು ಮತಗಳ ಮಧ್ಯೆ ದ್ವೇಷ ಭಾವನೆ ಬೆಳೆಯಲು ಬೇಕಾಗುವ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಲಾರಂಬಿಸಿದರು. ಹೀಗೆ ಹಣದ ದಾಹದಿಂದ ತಮ್ಮ ಪತ್ರಿಕಾ ರಂಗದ ಘನತೆಯನ್ನು ಮಣ್ಣು ಪಾಲು ಮಾಡಿ ಅದರ ಮೇಲೆ ಇದ್ದ ವಿಶ್ವಾಸಾರ್ಹತೆಯನ್ನು ನಾಶ ಮಾಡಿದರು. ಸುದ್ದಿ ಮಾಧ್ಯಮಗಳು ಮತಿಯಾ ಧ್ರುವೀಕರಣ ಮೂಲಕ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದವು, ಹೀಗೆ ಪತ್ರಿಕಾ ರಂಗದವು ವಿನಾಶದ ಅಂಚಿಗೆ ಜಾರುತ್ತಿದ್ದಾಗ ಕೆಲವು ಸಾಹಸಿ ಪತ್ರಕರ್ತರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮಗೆ ಇದ್ದ ಅತಿ ಸೀಮಿತ ಸಂಪನ್ಮೂಲದೊಂದಿಗೆ ಜನರ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಬರೆಯಲಾರಂಭಿಸಿದರು ಹೀಗೆ ಕಗ್ಗತ್ತಲಿನೆಡೆಗೆ ಸಾಗಿದ್ದ ಪತ್ರಿಕರಾಗಕ್ಕೆ ಚಿಕ್ಕದೊಂದು ದೀಪವನ್ನು ಹಚ್ಚಿದರು.

ಇತ್ತೀಚಿಗೆ ಅಮೆರಿಕಾ ದೇಶದ ಚುನಾವಣೆ ನಡೆದಾಗ ಹಲ್ಲಿನ ಜನರು ಆ ದೇಶದ ಸುದ್ದಿ ಮಾಧ್ಯಮಗಳು ಕೇವಲ ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣವಾದ ಎಕ್ಸ್ ಎಂಬ ವೇದಿಕೆಯನ್ನು ಬಳಸಿಕೊಂಡು ಜನರೇ ಒಂದು ಆಂದೋಲನದಂತೆ ತಮ್ಮ ತಮ್ಮ ಅನಿಸಿಕೆಗಳನ್ನು ಹಾಗೂ ತಮಗೆ ಆಗುತ್ತಿರುವ ಅನ್ಯಾಯಗಳನ್ನು ಜನರೆದುರು ತಿಳಿಸತೊಡಗಿದರು ಇದರ ಪರಿಣಾಮ ಇಂದು ಆ ದೇಶದಲ್ಲಿ ಅಧಿಕಾರವು ಬದಲಾವಣೆಯಾಗಿರುವುದನ್ನು ನಾವು ಕಾಣಬಹುದು. ಈ ಒಂದು ಉದಾಹರಣೆಯೂ ಸಾಮಾಜಿಕ ಜಾಲತಾಣಗಳಿಗೆ ಇರುವ ವ್ಯಾಪ್ತಿಯನ್ನು ನಮಗೆ ತಿಳಿಸುತ್ತದೆ, ಸಾಮಾಜಿಕ ಮಾಧ್ಯಮಗಳು ಸುದ್ದಿ ಪ್ರಸಾರದಲ್ಲಿ ಹೊಸ ಮಾರ್ಗವನ್ನು ತೆರೆದಿವೆ, ಮೊಬೈಲ್ ಫೋನಿನಲ್ಲಿ ದಿನದ ಅತಿ ಹೆಚ್ಚು ಸಮಯವನ್ನು ಕಳೆಯುವ ಇಂದಿನ ಪೀಳಿಗೆಗೆ ಯಾವುದೇ ಪೂರ್ವಗ್ರಹ ಪೀಡಿತವಾಗಿರದ ಹಾಗೂ ಸಮಾಜದ ಸ್ವಸ್ಥ ಹಾಳು ಮಾಡದ ನೈಜವಾದ, ನಿಖರವಾದ, ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಬಹುದಾಗಿದೆ. ನಮ್ಮ ದೇಶದಲ್ಲಿ ಹಲವಾರು ವರ್ಷಗಳ ಮೊದಲೇ ನ್ಯೂಸ್ ಲ್ಯಾಂಡ್ರಿ ಎಂಬ ಹೆಸರಿನ ಒಂದು ಸುದ್ದಿ ಮಾಧ್ಯಮವು ಸಾಕಷ್ಟು ಕೆಲಸವನ್ನು ಮಾಡಿದ್ದು ಯಾವುದೇ ರೀತಿಯ ಸರ್ಕಾರಿ ಅಥವಾ ಉದ್ಯಮಿಗಳಿಂದ ಜಾಹೀರಾತನ್ನು ಪಡೆಯದೇ ತನ್ನ ಚಂದದಾರರು ನೀಡುವ ಚಂದ ಹಣದಿಂದಲೇ ನಿರ್ವಹಿಸಲ್ಪಡುತ್ತಿದೆ. ಇದರ ಕಾರ್ಯವನ್ನು ಗಮನಿಸಿದ ಅನೇಕ ಪತ್ರಕರ್ತರು ಇದೇ ರೀತಿಯ ಅನೇಕ ಸಂಸ್ಥೆಗಳನ್ನು ಕಟ್ಟಿ, ಉದಾಹರಣೆಗೆ ದಿ ವೈರ್, ಸ್ಕ್ರೋಲ್.ಇನ್, ದಿ ಕಾರವಾನ್, ಹಾಗೂ ಪತ್ರಕರ್ತರದ ರವೀಶ್ ಕುಮಾರ್, ಹೀಗೆ ಪತ್ರಿಕಾರಂಗದಲ್ಲಿ ಇರುವ ಕತ್ತಲೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯ ನಮ್ಮ ರಾಜ್ಯದಲ್ಲಿಯೂ ಕೂಡ ಪತ್ರಿಕಾರಂಗದ ಸ್ಥಿತಿ ದಯಾನೀಯವಾಗಿದೆ ಹೀಗೆ ಇರಬೇಕಾದರೆ ಸಾಮಾಜಿಕ ಬದ್ಧತೆಯೊಂದಿಗೆ ಹುಟ್ಟಿಕೊಂಡ ಮಾಧ್ಯಮವೇ ಈ ದಿನ.com. ವಾಸ್ತವಿಕವಾಗಿ ಗೆದ್ದ ಎತ್ತಿನ ಬಾಲವನ್ನು ಹಿಡಿಯುವ ಜನಗಳ ಮುಂದೆ ಪತ್ರಿಕಾ ರಂಗವು ಸಾಗುತ್ತಿರುವ ಹಾದಿಯನ್ನು ಗಮನಿಸಿ ತಮ್ಮಲ್ಲಿ ಇದ್ದ ಸೀಮಿತ ಸಂಪನ್ಮೂಲಗಳೊಂದಿಗೆ ಶುರುವಾದ ಈ ದಿನ.ಕಾಂ 2023ರ ಚುನಾವಣಾ ಸಂದರ್ಭದಲ್ಲಿ ನಿಖರವಾಗಿ ಹಾಗೂ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಮಾಡಲು ಆಗದೆ ಇದ್ದ ಮಟ್ಟಿಗೆ ಚುನಾವಣೋತ್ತರ ಸಮೀಕ್ಷೆಯನ್ನು ಮಾಡಿ ನಮ್ಮ ರಾಜ್ಯದಲ್ಲಿಯೂ ನಶಿಸುತ್ತಿದ್ದ ಪತ್ರಿಕಾ ರಂಗಕ್ಕೆ ಬೆಳಕಾಗಿದ್ದಾರೆ. ಈ ದಿನ.com ಎಂಬುದು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನಲ್ಲಿ ತನ್ನ ಸುದ್ದಿಯನ್ನು ಬಿತ್ತರಿಸುತ್ತದೆ ಹಾಗೂ ವೆಬ್ಸೈಟ್ ನಲ್ಲಿಯೂ ಸಹ ಸ್ಥಳೀಯ ಸುದ್ದಿಗಳು ರಾಜ್ಯ ರಾಷ್ಟ್ರದ ಸುದ್ದಿಗಳನ್ನು ಪ್ರಕಟಿಸುತ್ತಾರೆ. ಇವರ ಸಾಮಾಜಿಕ ಬದ್ಧತೆಯು ಪೆರಿಯಾರ್ ರವರ ಮಾತಿನಂತೆ "ಉಳ್ಳವರು ಮತ್ತು ಇಲ್ಲದವರ ಸಂಘರ್ಷದಲ್ಲಿ ನಾನು ಇಲ್ಲದವರ ಪರ, ಬಲಾಡ್ಯರು ಹಾಗೂ ದುರ್ಬಲರ ಮಧ್ಯ ನಾನು ದುರ್ಬಲರ ಪರ, ಸಣ್ಣ ರಾಜ್ಯದ ಮೇಲೆ ದೊಡ್ಡ ರಾಜ್ಯ ದಬ್ಬಾಳಿಕೆ ಮಾಡಿದಾಗ ನಾನು ಸಣ್ಣ ರಾಜ್ಯದ ಪರ, ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರೆ ನಾನು ಅಲ್ಪಸಂಖ್ಯಾತರ ಪರ, ದೊಡ್ಡ ದೇಶವು ಸಣ್ಣ ದೇಶದ ಮೇಲೆ ದಾಳಿ ಮಾಡಿದರೆ ನಾನು ಸಣ್ಣ ದೇಶದ ಪರ" ಎಂಬಂತೆ ಇರುವುದು ಕೂಡ ಹರ್ಷದಾಯಕವಾಗಿದೆ ಹಾಗಾಗಿ ಕನ್ನಡ ನಾಡಿನ ಪತ್ರಿಕಾ ರಂಗವು ಈ ದಿನ.com ನೊಂದಿಗೆ ಸುರಕ್ಷಿತವಾಗಿ ಇದೆ.

Wednesday, 13 November 2024

ಮನುಜ ಮತ

 "ಧರ್ಮಗಳಿಗೆ ಒಗ್ಗಡಿಸುವ ಶಕ್ತಿ ಇಲ್ಲ ಕಳೆದ ನಾಲ್ಕು ಸಾವಿರ ವರ್ಷಗಳ ಇತಿಹಾಸದಲ್ಲಿ ಧರ್ಮಗಳು ವಿಭಜನೆಯನ್ನು ಮಾತ್ರ ಮಾಡಿವೆ" ಕುವೆಂಪು. ಇದೇ ನವೆಂಬರ್ 11 ನೇ ತಾರೀಕಿಗೆ ಕುವೆಂಪುರವರು ನಮ್ಮನ್ನು ಅಗಲಿ 30 ವರ್ಷಗಳಾಯಿತು, ಅಂದಿನ ಕಾಲದಲ್ಲಿ ಅವರು ಪ್ರತಿಪಾದಿಸಿದ್ದ ಪ್ರೌಢಿಮೆಯಾಗಲಿ,   ವೈಜ್ಞಾನಿಕ ಮನೋಭಾವನೆಗಳಾಗಲಿ, ಇಂದು ನಮ್ಮ ಮಧ್ಯೆ ಬಿತ್ತುವ ಮತ್ತೊಬ್ಬ ಮೇರು ಲೇಖಕನನ್ನು ನಾವು ಈಗ ಕಾಣುವುದು ದುರ್ಲಭವಾಗಿದೆ. ಇಂದು ಧರ್ಮಗಳನ್ನು ವೈಭವಿಕರಿಸುತ್ತಿರುವುದನ್ನು ನೋಡಿದರೆ ನಮ್ಮ ಮುಂದಿನ ಜನಾಂಗಕ್ಕೆ ನಾವು ಅಂಧಕಾರದ ಯುಗವನ್ನು ಬಿಟ್ಟು ಹೋಗುತ್ತಿದ್ದೇವೆನು ಎನಿಸುತ್ತದೆ. ಧರ್ಮ ಎಂಬುದು ತೀರ ವೈಯುಕ್ತಿಕ ವಿಚಾರವಾದರೂ, ಧರ್ಮದ ಹೆಸರಿನಲ್ಲಿ ಮೂಡನಂಬಿಕೆಗಳಿಗೆ ಬಲಿಯಾಗುತ್ತಿದ್ದೇವೆ. ಧರ್ಮಗಳ ಬಗ್ಗೆ ಅಧ್ಯಯನವನ್ನು ಮಾಡದೆ ಅಂತೆ ಕಂತೆಗಳೆಂಬ ಕಟ್ಟು ಕಥೆಗಳನ್ನು ನಂಬುತ್ತಾ ನಮ್ಮ ಮದ್ಯ ಇರುವ ಬೇರೆ ಧರ್ಮಗಳ ಬಗ್ಗೆ ವಿಷಯವನ್ನು ಕಾರುತ್ತಾ ಅಸಹಿಷ್ಣುಗಳಾಗಿ ರಾಕ್ಷಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಕುವೆಂಪುರವರು 20ನೇ ಶತಮಾನದಲ್ಲಿಯೇ 'ಮನುಜ ಮತ ವಿಶ್ವಪಥ' ಎಂಬ ಪರಿಕಲ್ಪನೆಯೊಂದಿಗೆ ವಿಶ್ವಮಾನವನಾಗುವ ಬಗೆಯನ್ನು ಪ್ರತಿಪಾದಿಸಿದ್ದರು,  ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಕುವೆಂಪುರವರು ಬದುಕಿದ್ದಿದ್ದರೆ ಅವರಿಗೆ ಧರ್ಮವಿರೋಧಿ ದೇಶದ್ರೋಹಿ ಎಂಬ ಪಟ್ಟವನ್ನು ಕಟ್ಟುತ್ತಿದ್ದಾರೋ ಏನೋ.! 

  'ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುತ್ತಾರೆ' ಆದರೆ ಇಂದಿನ ಮಕ್ಕಳು ಯಾವ ರೀತಿಯ ಪ್ರಜೆಗಳು ಆಗುತ್ತಾರೆ ಎಂಬುದು ಅವಲಂಬಿಸಿರುವುದು, ಇಂದಿನ ಪ್ರಜೆಗಳಾದ ನಮ್ಮ ಆಚಾರ ವಿಚಾರ ನಡೆ ನುಡಿಗಳಿಂದ. ನಾವು ನಮ್ಮ ಮನೆಯ ಮಕ್ಕಳನ್ನು ಯಾವ ರೀತಿಯ ಪ್ರಜೆಯಾಗಿ ರೂಪಿಸಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಏಕೆಂದರೆ ಇಂದಿನ ಶಿಕ್ಷಣವು ವ್ಯಾಪಾರವಾಗಿ ಹೋಗಿರುವುದರಿಂದಲೂ, ಅಥವಾ ಶಾಲೆಯ ಆಡಳಿತ ಮಂಡಳಿ ಇದೇ ಸಮಾಜದ ಭಾಗವಾಗಿ ಅದರ ಪ್ರತಿಬಿಂಬದಂತೆ ಕಾರ್ಯನಿರ್ವಹಿಸುವುದರಿಂದಲೂ, ಶಿಕ್ಷಣವು ಮಾರಾಟದ ಸರಕಾಗಿದೆ. ಶಾಲೆಗಳಲ್ಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಧರ್ಮ ನಿರಪೇಕ್ಷವಾಗಿ ಶಿಕ್ಷಣ ನೀಡಬೇಕಾಗಿದ್ದವರು, ಪೋಷಕರಿಂದ ಹಣವನ್ನು ವಸೂಲಿ ಮಾಡಲು ಎಲ್ಲಾ ಹಬ್ಬಹರಿದಿನಗಳನ್ನು ಶಾಲೆಗಳಲ್ಲಿ ಮಾಡಲಾರಂಭಿಸಿದ್ದಾರೆ.  ಪೋಷಕರು ಸಹ ಮುಗ್ಧ ಮಕ್ಕಳ ಮೇಲೆ ಈ ರೀತಿಯ ಕಾರ್ಯಕ್ರಮಗಳಿಂದ ಆಗುವ ಪರಿಣಾಮಗಳ ಅರಿವಿಲ್ಲದೆ, ಮಕ್ಕಳಿಗೆ ವಿವಿಧ ರೀತಿಯ ವೇಷಭೂಷಣಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ಮನುಷ್ಯನು ಯಾವುದಾದರೂ ಧರ್ಮವನ್ನು ಪಾಲಿಸುತ್ತಿದ್ದಾನೆ ಎಂದರೆ ಅವನು ತರ್ಕಹೀನ ಬದುಕನ್ನು ಬಾಳುತ್ತಿದ್ದಾನೆ ಎಂದೇ ಅರ್ಥ, ಹಾಗೂ ಅದು ಅವನ ವಯಕ್ತಿಕ ವಿಚಾರವಾಗಿರುವುದರಿಂದ ಅದು ಅವನಿಗೆ ಸಂವಿಧಾನವೇ ನೀಡಿರುವ ಹಕ್ಕು ಕೂಡ ಹೌದು. ಆದರೆ ಏನು ತಿಳಿಯದ ಮಕ್ಕಳಿಗೆ ಧರ್ಮವನ್ನು ಶಾಲೆಗಳಲ್ಲಿ ಬೋಧಿಸುವುದರಿಂದ ಅವರು ಚಿಕ್ಕ ವಯಸ್ಸಿನಲ್ಲಿಯೇ ತರ್ಕಹೀನರಾಗುತ್ತಾರೆ. ಇದರ ಪರಿಣಾಮ ನಮ್ಮ ಮುಂದಿನ ಪೀಳಿಗೆ ಅಂಧಕಾರದತ್ತ ಸಾಗುತ್ತದೆ. ಸ್ವಾತಂತ್ರ್ಯವು ಲಭಿಸಿದ ನಂತರದ ಜನರು, ಈಗಿನ ಜನರಿಗಿಂತ ಕಡಿಮೆ ವಿದ್ಯಾವಂತರಾಗಿದ್ದರೂ ಸಹ ಧರ್ಮಗಳನ್ನು ಶಾಲೆಗಳಿಂದ ದೂರವಿಟ್ಟು ನಮಗೆ ಬಹುದೊಡ್ಡ ಉಪಕಾರವನ್ನು ಮಾಡಿದ್ದಾರೆ ನಾವು ಸಹ ನಮ್ಮ ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡುವುದೇ ಆದರೆ ಅದು ಶಾಲೆಗಳಿಂದ ಧರ್ಮಗಳನ್ನು ದೂರವಿಡುವುದೇ ಆಗಿದೆ. ಯಾವುದೇ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಆ ದೇಶದ ಜನರು ವಿಚಾರವಂತರಾಗಿ, ವೈಜ್ಞಾನಿಕವಾಗಿ, ತರ್ಕಬದ್ಧರಾಗಿ, ಇರುವುದು ಅತ್ಯಗತ್ಯ ಮೇಲಿನ ಮೂರು ಅಂಶಗಳನ್ನು ನಾವು ನಮ್ಮ ಮಕ್ಕಳಲ್ಲಿ ಕಾಣಬೇಕಾದರೆ ಖಂಡಿತವಾಗಿ ಶಾಲೆಯಿಂದ ಧರ್ಮಗಳನ್ನು ಬಹುದೂರವಿಟ್ಟು ಧರ್ಮದ ಆಚರಣೆಯನ್ನು ಮನೆಯಲ್ಲಿಯೇ ಮಾಡಬೇಕಾಗುತ್ತದೆ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಅಂತೆ ಕಂತೆಗಳನ್ನು ನಂಬದೇ ಇರುವುದನ್ನು ಮಾಡಬೇಕಾಗುತ್ತದೆ. ಇದರ ಮೂಲಕ ಕುವೆಂಪು ರವರ ಮನುಜ ಮತ ವಿಶ್ವಪಥ ಎಂಬ ಕಲ್ಪನೆಯನ್ನು ಸಾಕಾರಗೊಳಿಸಬಹುದು.

Wednesday, 31 July 2024

ಮಾನಗೆಟ್ಟ ಸಂಸದ ಹಾಗೂ ಲಜ್ಜೆಗೆಟ್ಟ ಮಹಾಪ್ರಾಭು

 ಮಾನಗೆಟ್ಟ ಸಂಸದನೊಬ್ಬ ವಿರೋಧ ಪಕ್ಷದ ನಾಯಕರ ಜಾತಿಯನ್ನು ಕೇಳುತ್ತಾನೆ, ಲಜ್ಜೆಗೆಟ್ಟ ಮಹಾಪ್ರಭುಗಳು ಅದನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳುತ್ತಾರೆ. ಜಾತಿ ನಿರ್ಮೂಲನೆಯು ಹೇಗೆ ಸಾಧ್ಯ ಎಂಬುದನ್ನು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರು   ತಮ್ಮ ಪುಸ್ತಕ ವಾದ ಇನ್ಹಲೇಶನ್ ಆಫ್ ಕ್ಯಾಸ್ಟ್ ಎಂಬ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾರೆ ಇದಕ್ಕೆ ತಾಜಾ ಉದಾಹರಣೆಯೇ ನೆಹರುರವರ ಕುಟುಂಬ. ಮೋತಿಲಾಲ್ ನೆಹರು, ಕಾಶ್ಮೀರಿ ಪಂಡಿತರು (ಬ್ರಾಹ್ಮಣ) ಇವರ ಪತ್ನಿ  ಸ್ವರೂಪರಾಣಿ,  ಕಾಶ್ಮೀರಿ ಪಂಡಿತರು (ಬ್ರಾಹ್ಮಣ) ಇವರಿಬ್ಬರ ಮೊದಲನೆಯ ಮಗನೇ ಪಂಡಿತ್ ಜವಹರಲಾಲ್ ನೆಹರು ಕಾಶ್ಮೀರಿ ಪಂಡಿತ (ಬ್ರಾಹ್ಮಣ) ಇವರ ಪತ್ನಿ ಕಮಲ ನೆಹರು, ಬ್ರಾಹ್ಮಣ. ಇವರ ಮಗಳು ಇಂದಿರಾಗಾಂಧಿ ಕಾಶ್ಮೀರಿ ಪಂಡಿತರು (ಬ್ರಾಹ್ಮಣ) ಇವರ ಪತಿ ಫೈರೋಜೆ ಗಾಂಧಿ ಇವರು ಪಾರ್ಸಿ ಸಮುದಾಯಕ್ಕೆ ಸೇರಿದವರು.   ಇವರ ಮಕ್ಕಳಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಿದ್ದರಿಂದ ಅವರು ಬ್ರಾಹ್ಮಣರಾದರೂ ಆಗಬಹುದು ಅಥವಾ ಪಾರ್ಸಿ ಸಮುದಾಯಕ್ಕಾದರೂ ಸೇರಬಹುದು. ರಾಜೀವ್ ಗಾಂಧಿಯವರು ಮದುವೆಯಾದದ್ದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಸೋನಿಯಾ ಗಾಂಧಿಯನ್ನು. ಇವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಿದ್ದಾರೆ. ಇವರು ಯಾವ ಜಾತಿಗೆ ಸೇರಿದವರೆಂದು ತಾವೇ ನಿರ್ಧರಿಸಿ. ಇದೇ ರೀತಿ ಅಂತರ್ಜಾತಿ ವಿವಾಹಗಳಾದರೆ ಜಾತಿ ನಿರ್ಮೂಲನೆ ಸಾಧ್ಯವೆಂದು ಅಂಬೇಡ್ಕರ್ ರವರು ತಮ್ಮ ಪುಸ್ತಕದಲ್ಲಿ ವಿವರಿಸಿರುವುದು.