Wednesday, 13 November 2024

ಮನುಜ ಮತ

 "ಧರ್ಮಗಳಿಗೆ ಒಗ್ಗಡಿಸುವ ಶಕ್ತಿ ಇಲ್ಲ ಕಳೆದ ನಾಲ್ಕು ಸಾವಿರ ವರ್ಷಗಳ ಇತಿಹಾಸದಲ್ಲಿ ಧರ್ಮಗಳು ವಿಭಜನೆಯನ್ನು ಮಾತ್ರ ಮಾಡಿವೆ" ಕುವೆಂಪು. ಇದೇ ನವೆಂಬರ್ 11 ನೇ ತಾರೀಕಿಗೆ ಕುವೆಂಪುರವರು ನಮ್ಮನ್ನು ಅಗಲಿ 30 ವರ್ಷಗಳಾಯಿತು, ಅಂದಿನ ಕಾಲದಲ್ಲಿ ಅವರು ಪ್ರತಿಪಾದಿಸಿದ್ದ ಪ್ರೌಢಿಮೆಯಾಗಲಿ,   ವೈಜ್ಞಾನಿಕ ಮನೋಭಾವನೆಗಳಾಗಲಿ, ಇಂದು ನಮ್ಮ ಮಧ್ಯೆ ಬಿತ್ತುವ ಮತ್ತೊಬ್ಬ ಮೇರು ಲೇಖಕನನ್ನು ನಾವು ಈಗ ಕಾಣುವುದು ದುರ್ಲಭವಾಗಿದೆ. ಇಂದು ಧರ್ಮಗಳನ್ನು ವೈಭವಿಕರಿಸುತ್ತಿರುವುದನ್ನು ನೋಡಿದರೆ ನಮ್ಮ ಮುಂದಿನ ಜನಾಂಗಕ್ಕೆ ನಾವು ಅಂಧಕಾರದ ಯುಗವನ್ನು ಬಿಟ್ಟು ಹೋಗುತ್ತಿದ್ದೇವೆನು ಎನಿಸುತ್ತದೆ. ಧರ್ಮ ಎಂಬುದು ತೀರ ವೈಯುಕ್ತಿಕ ವಿಚಾರವಾದರೂ, ಧರ್ಮದ ಹೆಸರಿನಲ್ಲಿ ಮೂಡನಂಬಿಕೆಗಳಿಗೆ ಬಲಿಯಾಗುತ್ತಿದ್ದೇವೆ. ಧರ್ಮಗಳ ಬಗ್ಗೆ ಅಧ್ಯಯನವನ್ನು ಮಾಡದೆ ಅಂತೆ ಕಂತೆಗಳೆಂಬ ಕಟ್ಟು ಕಥೆಗಳನ್ನು ನಂಬುತ್ತಾ ನಮ್ಮ ಮದ್ಯ ಇರುವ ಬೇರೆ ಧರ್ಮಗಳ ಬಗ್ಗೆ ವಿಷಯವನ್ನು ಕಾರುತ್ತಾ ಅಸಹಿಷ್ಣುಗಳಾಗಿ ರಾಕ್ಷಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಕುವೆಂಪುರವರು 20ನೇ ಶತಮಾನದಲ್ಲಿಯೇ 'ಮನುಜ ಮತ ವಿಶ್ವಪಥ' ಎಂಬ ಪರಿಕಲ್ಪನೆಯೊಂದಿಗೆ ವಿಶ್ವಮಾನವನಾಗುವ ಬಗೆಯನ್ನು ಪ್ರತಿಪಾದಿಸಿದ್ದರು,  ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಕುವೆಂಪುರವರು ಬದುಕಿದ್ದಿದ್ದರೆ ಅವರಿಗೆ ಧರ್ಮವಿರೋಧಿ ದೇಶದ್ರೋಹಿ ಎಂಬ ಪಟ್ಟವನ್ನು ಕಟ್ಟುತ್ತಿದ್ದಾರೋ ಏನೋ.! 

  'ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುತ್ತಾರೆ' ಆದರೆ ಇಂದಿನ ಮಕ್ಕಳು ಯಾವ ರೀತಿಯ ಪ್ರಜೆಗಳು ಆಗುತ್ತಾರೆ ಎಂಬುದು ಅವಲಂಬಿಸಿರುವುದು, ಇಂದಿನ ಪ್ರಜೆಗಳಾದ ನಮ್ಮ ಆಚಾರ ವಿಚಾರ ನಡೆ ನುಡಿಗಳಿಂದ. ನಾವು ನಮ್ಮ ಮನೆಯ ಮಕ್ಕಳನ್ನು ಯಾವ ರೀತಿಯ ಪ್ರಜೆಯಾಗಿ ರೂಪಿಸಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಏಕೆಂದರೆ ಇಂದಿನ ಶಿಕ್ಷಣವು ವ್ಯಾಪಾರವಾಗಿ ಹೋಗಿರುವುದರಿಂದಲೂ, ಅಥವಾ ಶಾಲೆಯ ಆಡಳಿತ ಮಂಡಳಿ ಇದೇ ಸಮಾಜದ ಭಾಗವಾಗಿ ಅದರ ಪ್ರತಿಬಿಂಬದಂತೆ ಕಾರ್ಯನಿರ್ವಹಿಸುವುದರಿಂದಲೂ, ಶಿಕ್ಷಣವು ಮಾರಾಟದ ಸರಕಾಗಿದೆ. ಶಾಲೆಗಳಲ್ಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಧರ್ಮ ನಿರಪೇಕ್ಷವಾಗಿ ಶಿಕ್ಷಣ ನೀಡಬೇಕಾಗಿದ್ದವರು, ಪೋಷಕರಿಂದ ಹಣವನ್ನು ವಸೂಲಿ ಮಾಡಲು ಎಲ್ಲಾ ಹಬ್ಬಹರಿದಿನಗಳನ್ನು ಶಾಲೆಗಳಲ್ಲಿ ಮಾಡಲಾರಂಭಿಸಿದ್ದಾರೆ.  ಪೋಷಕರು ಸಹ ಮುಗ್ಧ ಮಕ್ಕಳ ಮೇಲೆ ಈ ರೀತಿಯ ಕಾರ್ಯಕ್ರಮಗಳಿಂದ ಆಗುವ ಪರಿಣಾಮಗಳ ಅರಿವಿಲ್ಲದೆ, ಮಕ್ಕಳಿಗೆ ವಿವಿಧ ರೀತಿಯ ವೇಷಭೂಷಣಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ಮನುಷ್ಯನು ಯಾವುದಾದರೂ ಧರ್ಮವನ್ನು ಪಾಲಿಸುತ್ತಿದ್ದಾನೆ ಎಂದರೆ ಅವನು ತರ್ಕಹೀನ ಬದುಕನ್ನು ಬಾಳುತ್ತಿದ್ದಾನೆ ಎಂದೇ ಅರ್ಥ, ಹಾಗೂ ಅದು ಅವನ ವಯಕ್ತಿಕ ವಿಚಾರವಾಗಿರುವುದರಿಂದ ಅದು ಅವನಿಗೆ ಸಂವಿಧಾನವೇ ನೀಡಿರುವ ಹಕ್ಕು ಕೂಡ ಹೌದು. ಆದರೆ ಏನು ತಿಳಿಯದ ಮಕ್ಕಳಿಗೆ ಧರ್ಮವನ್ನು ಶಾಲೆಗಳಲ್ಲಿ ಬೋಧಿಸುವುದರಿಂದ ಅವರು ಚಿಕ್ಕ ವಯಸ್ಸಿನಲ್ಲಿಯೇ ತರ್ಕಹೀನರಾಗುತ್ತಾರೆ. ಇದರ ಪರಿಣಾಮ ನಮ್ಮ ಮುಂದಿನ ಪೀಳಿಗೆ ಅಂಧಕಾರದತ್ತ ಸಾಗುತ್ತದೆ. ಸ್ವಾತಂತ್ರ್ಯವು ಲಭಿಸಿದ ನಂತರದ ಜನರು, ಈಗಿನ ಜನರಿಗಿಂತ ಕಡಿಮೆ ವಿದ್ಯಾವಂತರಾಗಿದ್ದರೂ ಸಹ ಧರ್ಮಗಳನ್ನು ಶಾಲೆಗಳಿಂದ ದೂರವಿಟ್ಟು ನಮಗೆ ಬಹುದೊಡ್ಡ ಉಪಕಾರವನ್ನು ಮಾಡಿದ್ದಾರೆ ನಾವು ಸಹ ನಮ್ಮ ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡುವುದೇ ಆದರೆ ಅದು ಶಾಲೆಗಳಿಂದ ಧರ್ಮಗಳನ್ನು ದೂರವಿಡುವುದೇ ಆಗಿದೆ. ಯಾವುದೇ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಆ ದೇಶದ ಜನರು ವಿಚಾರವಂತರಾಗಿ, ವೈಜ್ಞಾನಿಕವಾಗಿ, ತರ್ಕಬದ್ಧರಾಗಿ, ಇರುವುದು ಅತ್ಯಗತ್ಯ ಮೇಲಿನ ಮೂರು ಅಂಶಗಳನ್ನು ನಾವು ನಮ್ಮ ಮಕ್ಕಳಲ್ಲಿ ಕಾಣಬೇಕಾದರೆ ಖಂಡಿತವಾಗಿ ಶಾಲೆಯಿಂದ ಧರ್ಮಗಳನ್ನು ಬಹುದೂರವಿಟ್ಟು ಧರ್ಮದ ಆಚರಣೆಯನ್ನು ಮನೆಯಲ್ಲಿಯೇ ಮಾಡಬೇಕಾಗುತ್ತದೆ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಅಂತೆ ಕಂತೆಗಳನ್ನು ನಂಬದೇ ಇರುವುದನ್ನು ಮಾಡಬೇಕಾಗುತ್ತದೆ. ಇದರ ಮೂಲಕ ಕುವೆಂಪು ರವರ ಮನುಜ ಮತ ವಿಶ್ವಪಥ ಎಂಬ ಕಲ್ಪನೆಯನ್ನು ಸಾಕಾರಗೊಳಿಸಬಹುದು.

No comments:

Post a Comment